ಯಾರಿಗಾದರೂ ಸರಿ... ನಿಧಾನವಾಗಿ ತಿನ್ನಿ ಅಂತ ಉಪಚಾರದ ಮಾತಾಡಿದರೆ ಸಂತೋಷ ಆಗುತ್ತೆ. ಅದರಲ್ಲೂ ಮನೆಯಲ್ಲಿ ಎಲ್ಲರಿಗೂ ತಿಂಡಿ ಕೊಟ್ಟು ನಂತರ ತಾನು ತಿನ್ನುವ ಹೆಂಡತಿಗೆ ಗಂಡ ಹೀಗೆ ಹೇಳಿದರಂತೂ ಕೇಳುವುದೇ ಬೇಡ.
ನಿನ್ನೆ ಘಮ ಘಮ ಉಪ್ಪಿಟ್ಟು ಮಾಡಿ ಗರಿಗರಿಯಾದ ಖಾರಾ ಮಿಕ್ಸ್ಚರ್ ಜೊತೆ ತಿಂಡಿ ತಟ್ಟೆ ಹಿಡಿದು ಕೂತೆ. ಆ ವೇಳೆಗೆ ಆಗಲೇ ಎಲ್ಲರೂ ತಿಂಡಿ ಮುಗಿಸಿದ್ದರು. ಮೊದಲ ತುತ್ತು ಬಾಯಿಗೆ ಇಟ್ಟು ಆಹಾ ಎಂದು ಆಸ್ವಾದಿಸುವ ವೇಳೆಗೆ ಎದುರಿಗೆ ಇದ್ದ ಯಜಮಾನ "ನಿಧಾನವಾಗಿ ತಿನ್ನು ....!" ಎಂದಷ್ಟೇ ಹೇಳಿದ ಕ್ಷಣ ಸ್ವರ್ಗ ಕಣ್ಣೆದುರೇ ಬಂದಂತಾಗಿ ಮುಖ ಅರಳಿತು... ಕಣ್ಣು ಆಶ್ಚರ್ಯದಿಂದ ಅಗಲವಾಗಿ ಅವರನ್ನೇ ನೋಡುವಾಗ.... "......ಎಷ್ಟೊಂದು ಶಬ್ದ ಮಾಡ್ಕೊಂಡು ತಿಂತಿದೀಯ... ಜೋರಾಗಿ ಕೇಳಿಸುತ್ತಿದೆ " ಅನ್ನೋದೇ ಆಸಾಮಿ. ಅರಳಿದ್ದ ಕಣ್ಣಲ್ಲಿ ನೀರು ಬರೋಷ್ಟು ನಕ್ಕಿದ್ದಾಯ್ತು!!
ಹತ್ತಿರದಲ್ಲೇ ಸ್ವರ್ಗ ರಪ್ ಅಂತ ಪಾಸಾದ್ಹಂಗಾಯ್ತು!!!
No comments:
Post a Comment