ನಮ್ಮೂರ ಸುಡು ಬಿಸಿಲು, ನಮ್ಮೂರ ಗಾಳಿ,
ನಮ್ಮ ಮನೆಯ ಅಂಗಳದ ದುಂಡು ಮಲ್ಲಿಗೆ ಬಳ್ಳಿ,
ಮುಗಿಲ ಚುಂಬಿಸುವ ತೆಂಗಿನ ಮರ, ಅವಕ್ಕೆ ಹಬ್ಬಿರುವ ಎಲೆ ಬಳ್ಳಿ,
ಕ್ಷಣ ಕ್ಷಣಕೂ ಸೆಳೆಯುತಿಹುದು ಎಲ್ಲಿದ್ದರೂ ನನ್ನ!
ಈ ನೆನಪು ಸಿಹಿಯೋ ಕಹಿಯೋ ಅರಿಯದಾಗಿದೆ ಮನ! ತುಂಬಿಸಿದೆ ಕಣ್ಣ!
ಬೆಳ್ಳಿ ಬೆಳದಿಂಗಳಿನಲ್ಲಿ ಅಮ್ಮನಿತ್ತ ಕೈತುತ್ತು, ಅಪ್ಪ ಹೇಳಿದ ಚಂದಮಾಮನ ಕಥೆ!
ನನ್ನ ತಂಗಿಯ ಮುದ್ದು ಮಾತಿನ ಕಚಗುಳಿ, ತಮ್ಮ ನಕ್ಕಾಗ ಬಿದ್ದ ಕೆನ್ನೆಯ ಗುಳಿ!
ನಮ್ಮಜ್ಜಿಯ ಹಳ್ಳಿ ಭಾಷೆ, ಅವರೊಡನೆ ಆಡಿದ ಚಾವಂಗ ಬೇಳಿ,
ಕ್ಷಣ ಕ್ಷಣಕೂ ಸೆಳೆಯುತಿಹುದು ಎಲ್ಲಿದ್ದರೂ ನನ್ನ, ತುಂಬಿಸಿದೆ ಕಣ್ಣ!
ಯಾರಿಗೂ ತಿಳಿಯದ, ಮಾತಿಗೂ ನಿಲುಕದ, ಮುಗಿಲನೂ ಮೀರಿದ,
ಹೃದಯದ ಈ ಭಾವ! ಅದೇಕೋ ಬಲು ಭಾರ! ಕೇಳುವವರು ಯಾರ?
ಹೋಗೊಮ್ಮೆ ಕಂಡು ಬರಲೇ ಎಲ್ಲರನು ಎಂದುಕೊಂಡರೆ...,
ಬಂದಿಹೆನು ಬಹು ದೂರ! ಮೈಲಿಗಳು ಸಾವಿರ...!
ಬಂದ ಸುಗಮ ದಾರಿಯ ಕಂಡು ಸಂತಸವ ಪಡಬೇಕೆ,
ಹಿಂತಿರುಗಲಾಗದ್ದಕ್ಕೆ ಮನ ನೋಯಬೇಕೆ,
ಮುಂಬರುವ ಸಮಯಕೆ ಮುನ್ನುಗ್ಗಬೇಕೆ? ಅರಿಯದಾಗಿದೆ ಮನ!
ಹೀಗೆ ಇರುವುದೇ ಜೀವನ! ಇದರ ನೆನಪು ಒಂದು ಕ್ಷಣ, ತುಂಬಿಸಿದೆ ಕಣ್ಣ!
No comments:
Post a Comment