Friday, February 15, 2008

ನಾನು ಈ ಕಡೆ ಇಣುಕಿ ನೋಡದೆ ನೆನ್ನೆಗೆ ಸರಿಯಾಗಿ ಒಂದು ವರ್ಷವಾಯ್ತು! ಕೆಲಸ ಮಾಡದೇ ಇರೋದಕ್ಕೆ ನೂರೆಂಟು ನೆಪ ಸಿಕ್ಕುತ್ತದೆ... ಹೇಳ್ಬೇಕಾದ್ದಿಲ್ಲ! ಆದರು ಯೋಚಿಸಲು, ಟೈಪಿಸಲು, ಸಮಯವಿರಲಿಲ್ಲ ಅನ್ನೋ ನೆಪ ಕೊಡಲು ಬೇಸರ ಆಗೋದಿಲ್ಲ.

ಹೀಗೆ ಮೊನ್ನೆ ಮಾತನಾಡೋವಾಗ ನಮ್ಮವರೊಬ್ಬರ ಮದುವೆ ಪ್ರಸ್ತಾಪ ಬಂತು! ಗಂಡು ಹೆಣ್ಣಿನ ನಡುವೆ ವಯಸ್ಸಿನ ಅಂತರ ಹೆಚ್ಚಾಗಿದೆ ಅಂದರು... ಅದರ ಬಗ್ಗೆಯೇ ಸ್ವಲ್ಪ ಆಲೋಚಿಸುತ್ತಿದ್ದಾಗ ಹೊಳೆದದ್ದು ಇಷ್ಟು...

ನಾವು ಕೇಳಿರುವ ಪ್ರಕಾರ ಜೀವನ, ಸಂಸಾರ ಅನ್ನೋ ಬಂಡಿ ಎಳಿಯೋದಕ್ಕೆ ಗಂಡ ಹೆಂಡತಿ ಎರಡು ಚಕ್ರಗಳಂತೆ. ಎರಡು ಒಂದೆ ಸಮ ಬಂಡಿಯನ್ನು ಎಳೆಯಬೇಕು, ಹಾಗಾದಲ್ಲಿ ಜೀವನದ ಪಥದಲ್ಲಿ ಪ್ರಗತಿಯತ್ತ (ಗುರಿಯತ್ತ) ಸಾಗುತ್ತೇವೆ. ಹೀಗೆಲ್ಲ ಹೇಳುವಾಗ ಮಿಕ್ಕ ಎಷ್ಟೋ ವಿಷಯಗಳನ್ನು ಈ ಉಪಮಾನದಲ್ಲಿ ತಾಳೆ ಹಾಕಲು ಮರೆತೇ ಬಿಡುತ್ತೇವೆ... ಗಂಡ ಹೆಂಡತಿ ೨ ಚಕ್ರಗಳು, ಸುಗಮವೋ ದುರ್ಗಮವೋ ಎರಡು ಉರುಳುರುಳಿ ಬಂಡಿಯನ್ನು ಮುನ್ನಡೆಸುತ್ತವೆ, ಮಕ್ಕಳು ಎಂಬ ಜವಾಬ್ದಾರಿಯನ್ನು ಹೊತ್ತು ಸಾಗುತ್ತಿರುತ್ತಾರೆ... ಮಕ್ಕಳು ದೊಡ್ಡವರಾದ ಹಾಗೆ, ಅವರಿಗೊಂದು ಜೋಡಿ ಚಕ್ರವನ್ನು ಹುಡುಕಬೇಕು. ಮೊದಲು ಜಾತಿ ಎಂಬ ಜರಡಿ ಹಿಡಿಯುತ್ತೇವೆ, ಅಮೇಲೆ ವಿದ್ಯಾರ್ಹತೆಗಳು, ನಂತರ ಜಾತಕ, ಹೀಗೆ ಇನ್ನು ಮುಂತಾದುವು. ಕೊನೆಯಲ್ಲಿ ಬರುವುದೇ ಈ ವಯಸ್ಸಿನ ಅಂತರ ಎಷ್ಟು ಎಂದು. ನನ್ನ ಅನಿಸಿಕೆ ಪ್ರಕಾರ ವಯಸ್ಸಿನ ಅಂತರ ೩ ರಿಂದ ೫ ವರ್ಷದೊಳಗಿದ್ದರೆ ಚೆನ್ನ. "ಯಾಕೆ?" ಅಂತ ಕೇಳಿದ್ರ? ಇಲ್ಲದೆ ಇದ್ದರೆ ಕೇಳಿ... ಇದಕ್ಕೂ ಒಂದು ಲಾಜಿಕ್ ಇದೆ!! ಈ ವಯಸ್ಸನ್ನು ಚಕ್ರದ ಸುತ್ತಳತೆ (circumference) ಗೆ ಹೊಲಿಸೋಣ. ಒಂದು ಚಕ್ರದ ಸುತ್ತಳತೆಯು ಇನ್ನೊಂದು ಚಕ್ರದ ಸುತ್ತಳತೆಗಿಂತ ತುಂಬ ಚಿಕ್ಕದಾಗಿದ್ದರೆ ಏನಾಗಬಹುದು ಹೇಳಿ!!? ಚಿಕ್ಕ ಚಕ್ರದ ಸುತ್ತಳತೆಯಷ್ಟೇ ಇರುವ ವೃತ್ತದ(level of maturity) ಸುತ್ತ ಬಂಡಿ ಸುತ್ತುತ್ತಿರುತ್ತದಲ್ಲವೇ? ಅಂದರೆ ನಿಂತ ಜಾಗದಲ್ಲೇ ಬಂಡಿ ಸುತ್ತು ಹೊಡೆಯುವುದು ತಾನೆ. ಹಗಲು ಇರುಳುಗಳು, ದಿನಗಳು ಕಳೆಯುತ್ತವೆ ಹೊರತು, ಬಂಡಿ ಮುಂದೆಯೇ ಹೋಗುವುದಿಲ್ಲ.. ಮದುವೆಯಾದ ದಿನ ಎಲ್ಲಿದ್ದೆವೋ ಅಲ್ಲಿಯೇ ಇಂದು ಇದ್ದೇವೆ ಅಂತ ೨೫ ನೆ ವಾರ್ಷಿಕೋತ್ಸವದ ದಿನ ಅನ್ನಿಸಿದರೆ ಆಶ್ಚರ್ಯಪಡಬೇಕಾದ್ದಿಲ್ಲ ಬಿಡಿ! ಹಾಗು ಹೀಗೂ ದೊಡ್ಡ ಚಕ್ರ ಸ್ವಲ್ಪ ಬಲವಂತವಾಗಿ ಮುಂದೆ ಹೋಗಲು ಎಳೆದರೆ("ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು" ಅನ್ನೋ ಹಾಗೇ) ಸಣ್ಣ ಚಕ್ರ ಪಾಪಾ ಸವೆದು ಹೋಗುತ್ತದೆ. ಹಾಗೆಯೇ ಇನ್ನು ಸ್ವಲ್ಪ ದೂರ ಎಳೆದರೆ ಕುಂಟಲು ಶುರು ಆಗುತ್ತದೆ. ಆಗಲು ನಿಲ್ಲಿಸದೆ ಎಳೆದರೆ ಬಂಡಿ ಒಂಟಿ ಚಕ್ರದ್ದಾಗುತ್ತೆ...ಅಲ್ಲವೇ! ಅದೇ ಅಂತರ ಬರಿ ೩ - ೫ ವರ್ಷದೊಳಗಿದ್ದರೆ ಒಮ್ಮೆ ಆಕಡೆ, ಒಮ್ಮೆ ಈ ಕಡೆ ಎಳೆದಾಡಿದರೂ, ಎರಡು ಚಕ್ರಗಳು ಸವೆದರೂ, ಸ್ವಲ್ಪ ಮುಂದೆ ಹೋಗಬಹುದು ಎನ್ನಿಸುವುದಿಲ್ಲವೇ!!?

ಇದು ನನ್ನ ಅನಿಸಿಕೆ ಮಾತ್ರ, ಇದನ್ನು ಮೀರಿ ಋಣಾನುಬಂಧ ಎನ್ನೋ ಎಳೆಯ ೨ ತುದಿಯನ್ನು ಭಗವಂತ ಯಾರು ಯಾರಿಗೆ ಕಟ್ಟಿರುತ್ತಾನೆಯೋ ಯಾರಿಗೆ ಗೊತ್ತು! ಈ ಎಳೆಯ ೩ ಗಂಟಿಗೆ ಸಿಲುಕಿ ಎಳೆದಾಡಿ, ಎಳೆದಾಡಿಸಿಕೊಂಡು ಸಾಗುತ್ತಿರುವ ಎಷ್ಟೋ ಬಂಡಿಗಳ ಉದಾಹರಣೆ ನಮ್ಮ ಜೀವನದುದ್ದಕ್ಕೂ ಸಿಗುತ್ತಲೇ ಇರುತ್ತದೆ!!

1 comment:

ವಿ.ರಾ.ಹೆ. said...

ನಮಸ್ಕಾರ,ಹೀಗೆ ಎಲ್ಲೆಲೋ ಬ್ರೌಸ್ ಮಾಡುತ್ತಾ ನಿಮ್ ಬ್ಲಾಗಿಗೆ ಬಂದೆ. ನೀವು ೨೦೦೫ ರಿಂದಲೇ ಬ್ಲಾಗ್ ಬರಿತಾ ಇದಿರಾ!! one of the oldest bloggers in Kannada.

ಅಂದ ಹಾಗೆ ನಂಗೊತ್ತಿರೋ ಪ್ರಕಾರ ಹುಡುಗಿಯರಿಗೆ ಹುಡುಗರಿಗಿಂತ ಮಾನಸಿಕ ಬೆಳವಣಿಗೆ ಜಾಸ್ತಿಯಿರುವುದರಿಂದ ಅದನ್ನು ಸರಿದೂಗಿಸುವುದಕ್ಕೋಸ್ಕರ ವಯಸ್ಸಿನ ಅಂತರವಿಟ್ಟು ಮದುವೆ ಮಾಡ್ತಾರೆ. ಅಲ್ಲಿಗೆ ಚಕ್ರಗಳ ಸುತ್ತಳತೆ ಸರಿಹೋಗಿ ಬಂಡಿ ಸರಾಗವಾಗಿ ಹೋಗ್ಲಿ ಅಂತ :)